Home » Latest Stories » ಕೃಷಿ » ರಾಷ್ಟೀಯ ರೈತರ ದಿನ 

ರಾಷ್ಟೀಯ ರೈತರ ದಿನ 

by Punith B
112 views

ರಾಷ್ಟ್ರೀಯ ರೈತರ ದಿನವನ್ನು ಪ್ರತಿ ವರ್ಷ ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ. ಭಾರತದ 5 ನೇ ಪ್ರಧಾನ ಮಂತ್ರಿಯಾದ ಚೌಧರಿ ಚರಣ್ ಸಿಂಗ್ ಅವರ ಗೌರವಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಚೌಧರಿ ಚರಣ್ ಸಿಂಗ್ ಅವರು ಡಿಸೆಂಬರ್ 23, 1902 ರಂದು ಮೀರತ್‌ನ ನೂರ್‌ಪುರದಲ್ಲಿ ಜನಿಸಿದರು. 

ಚೌಧರಿ ಚರಣ್ ಸಿಂಗ್ ಅವರು ಅಲ್ಪಾವಧಿಗೆ ಭಾರತದ ಪ್ರಧಾನಿಯಾಗಿದ್ದರು. ಅವರು ಜುಲೈ 1979 ರಲ್ಲಿ ಪ್ರಧಾನ ಮಂತ್ರಿ ಹುದ್ದೆಯನ್ನು ವಹಿಸಿಕೊಂಡರು ಮತ್ತು ಜನವರಿ 1980 ರವರೆಗೆ ಆಡಳಿತವನ್ನು ನಡೆಸಿದರು. ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಬಹಳಷ್ಟು ಯೋಜನೆಗಳು ಇಂದಿಗೂ ಸಹ ಜನಪ್ರಿಯವಾಗಿದೆ. ಇದರ ಜೊತೆಗೆ ಇವರು ವಿಶೇಷವಾಗಿ ಹಲವಾರು ರೈತ ಸ್ನೇಹಿ ಯೋಜನೆಗಳನ್ನು ಪರಿಚಯಿಸುವ ಮೂಲಕ ರೈತರ ಸಮೂಹದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. 

ಸರಳ ಜೀವನವನ್ನು ನಡೆಸುವುದರಲ್ಲಿ ನಂಬಿಕೆ ಇರಿಸಿದ್ದ ಅವರು ಹಲವು ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ಭಾರತ ಸರ್ಕಾರವು ಚೌಧರಿ ಚರಣ್ ಸಿಂಗ್ ಅವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇಂದು ಅವರ ಸ್ಮಾರಕವನ್ನು ಕಿಸಾನ್ ಘಾಟ್ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ ಲಕ್ನೋದ ಅಮೌಸಿ ವಿಮಾನ ನಿಲ್ದಾಣವನ್ನು ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ಮೀರತ್ ವಿಶ್ವವಿದ್ಯಾಲಯವನ್ನು ಚೌಧರಿ ಚರಣ್ ಸಿಂಗ್ ವಿವಿ ಎಂದು ಮರುನಾಮಕರಣ ಮಾಡಲಾಯಿತು.

ಭಾರತದ ಎಲ್ಲಾ ರಾಜ್ಯಗಳೂ ಸಹ ರಾಷ್ಟ್ರೀಯ ರೈತ ದಿನಾಚರಣೆಯನ್ನು ಪ್ರತಿವರ್ಷವೂ ಆಚರಣೆ ಮಾಡುತ್ತವೆ. ಹೆಚ್ಚು ಕೃಷಿ ಕಾರ್ಯಚಟುವಟಿಕೆ ನಡೆಯುವ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ ಮತ್ತು ಇನ್ನಿತರ ಹಲವು ರಾಜ್ಯಗಳೂ ಸಹ ಪ್ರಮುಖವಾಗಿ ಈ ದಿನವನ್ನು ಆಚರಣೆ ಮಾಡುತ್ತವೆ. ಈ ದಿನದಂದು ಕೃಷಿ ಸಮುದಾಯದ ಅನೇಕ ಸದಸ್ಯರು ಮತ್ತು ಗ್ರಾಮೀಣ ವಿಭಾಗಗಳು ಒಟ್ಟಾಗಿ ಕೃಷಿ ಆಧಾರಿತ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ. ಚರ್ಚಾ ಸ್ಪರ್ಧೆಗಳು, ರಸಪ್ರಶ್ನೆಗಳಂತಹ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕೃಷಿ ಕೆಲಸಕ್ಕೆ ಸಂಬಂಧಿಸಿದಂತೆ ರೈತರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ, ರೈತರಿಗೆ ಮತ್ತು ಕೃಷಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ವಿಶೇಷ  ಚರ್ಚೆಗಳನ್ನು ನಡೆಸಲಾಗುತ್ತದೆ. ರೈತರು ಕೃಷಿಯಲ್ಲಿ ಅನುಭವಿಸುವ ಸಮಸ್ಯೆಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಕೆಲಸವನ್ನು ಇದೇ ಸಂದರ್ಭದಲ್ಲಿ ಮಾಡಲಾಗುತ್ತದೆ. ಇದರ ಜೊತೆಗೆ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿರುವವರನ್ನು ಗುರುತಿಸಿ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ.

ರೈತ ದಿನಾಚರಣೆಯ ನಿಜವಾದ ಉದ್ದೇಶ: ರೈತರ ಕಾರ್ಯಚಟುವಟಿಕೆ ಇಲ್ಲದೆ ಪ್ರಪಂಚದಲ್ಲಿ ಜೀವನ ನಡೆಸುವುದು ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿರದ ಮಾತು. ಹಾಗಾಗಿ ರೈತರ ಹಿತವನ್ನು ಕಾಪಾಡುವುದು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವುದು ಉತ್ತಮ ಸಮಾಜದ ಜವಾಬ್ದಾರಿ ಆಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಮಾಜದ ಎಲ್ಲ ವರ್ಗಗಳು ಸಹ ರೈತರೊಂದಿಗೆ ಕೈಜೋಡಿಸುವುದು ಅಗತ್ಯವಾಗಿದೆ.  

ರೈತರ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದರಿಂದ ಅವರ ಜೀವನ ಮಟ್ಟವನ್ನು ಗಣನೀಯವಾಗಿ ಸುಧಾರಿಸಲು ಸಾಧ್ಯವಿದೆ. ರೈತರಿಗೆ ಇದಕ್ಕಿಂತ ಉತ್ತಮ ಕೊಡುಗೆ ಬೇರೊಂದಿಲ್ಲ ಎಂದು ಹೇಳಬಹುದು. ಈ ಉದ್ದೇಶಕ್ಕಾಗಿಯೇ ರೈತ ದಿನಾಚರಣೆಯನ್ನು ಆಚರಿಸುವುದು ಹೆಚ್ಚು ಅವಶ್ಯಕವಾಗಿದೆ. ನಮಗೆ ಹಣ್ಣುಗಳು, ತರಕಾರಿಗಳು ಮತ್ತು ಭತ್ತದಂತಹ ಮೂಲ ಸರಕುಗಳನ್ನು ಒದಗಿಸುವ ವರ್ಗವನ್ನು ರಕ್ಷಣೆ ಮಾಡುವುದು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವುದು ಸಮಾಜದ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ. 

ಸಾಮಾನ್ಯವಾಗಿ ಕೃಷಿ ಮಾಡಲು ಅಗತ್ಯವಿರುವ ಹೂಡಿಕೆ, ಸಲಕರಣೆ ಮತ್ತು ಇತರ ಅಗತ್ಯ ವಸ್ತುಗಳನ್ನು ರೈತರಿಗೆ ಲಭ್ಯವಾಗಿಸುವ ಜೊತೆಗೆ ಅದರ ಪ್ರಯೋಜನ ಪಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಸರ್ಕಾರವು ವಿವಿಧ ಯೋಜನೆಗಳನ್ನು ರೈತರಿಗಾಗಿ ರೂಪಿಸುತ್ತದೆ ಮತ್ತು ಅದರ ಪ್ರಯೋಜನಗಳನ್ನು ರೈತರಿಗೆ ತಲುಪಿಸಲು ಅನೇಕ ಕೃಷಿ ಕಾರ್ಯಕ್ರಮಗಳನ್ನು ಕೂಡ ಆಯೋಜನೆ ಮಾಡುತ್ತದೆ. ಆದರೆ ಇಷ್ಟೆಲ್ಲಾ ಕ್ರಮಗಳ ನಂತರವೂ ಸಹ ಹಲವು ಬಾರಿ ಅಗತ್ಯ ಮಾಹಿತಿಗಳು ರೈತರನ್ನು ತಲುಪುವಲ್ಲಿ ವಿಫಲವಾಗುತ್ತವೆ. ಹೀಗಾಗಿ ವರ್ಷದಲ್ಲಿ ಕನಿಷ್ಠ ಒಂದು ದಿನವನ್ನು ರೈತ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ರೈತರಿಗೆ ಗೌರವವನ್ನು ಸೂಚಿಸುವ ಜೊತೆಗೆ ಅವರ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವುದು ಸಹ ಇದರ ಮೂಲ ಉದ್ದೇಶವಾಗಿದೆ.  

ರಾಷ್ಟ್ರೀಯ ರೈತ ದಿನಾಚರಣೆ ಹೇಗೆ ಆಚರಣೆ ಮಾಡಬೇಕು?  : ರೈತರ ದಿನವನ್ನು ಆಚರಣೆ ಮಾಡಲು ವಿಶೇಷವಾಗಿ ಖರ್ಚುಗಳನ್ನು ಮಾಡುವ ಅಥವಾ ಕಾರ್ಯಕ್ರಮಗಳನ್ನು ಆಯೋಜಿಸುವ ಅಥವಾ ಭಾಗವಹಿಸುವ ಅಗತ್ಯ ಇರುವುದಿಲ್ಲ, ರೈತ ದಿನವನ್ನು ನೀವು ವೈಯಕ್ತಿಕ ಮಟ್ಟದಲ್ಲಿ ಮತ್ತು ಸಾಂಸ್ಥಿಕ ಮಟ್ಟದಲ್ಲಿ ವಿಭಿನ್ನವಾಗಿ ಆಚರಣೆ ಮಾಡಬಹುದು. ಇದರ ಜೊತೆಗೆ ರೈತರ ಮಾರುಕಟ್ಟೆಯಲ್ಲಿ ಅವರ ಉತ್ಪನ್ನವನ್ನು ಖರೀದಿ ಮಾಡುವ ಮೂಲಕವೂ ಸಹ ರೈತ ದಿನವನ್ನು ಆಚರಿಸಬಹುದು ಮತ್ತು ಇದರ ಮೂಲಕ ನಿಮ್ಮ ಬೆಂಬಲವನ್ನು ಅವರಿಗೆ ಸೂಚಿಸಬಹುದು. ರೈತರಿಂದ ನೀವು ನೇರವಾಗಿ ಖರೀದಿಸುವ ಮೂಲಕ ತಾಜಾ ಮತ್ತು ಅಗ್ಗದ ಉತ್ಪನ್ನವನ್ನು ಪಡೆದುಕೊಳ್ಳಬಹುದು. ಈ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರು ಹೆಚ್ಚು ಆದಾಯವನ್ನು ಗಳಿಸಲು ನೆರವಾಗಬಹುದು. ಈ ರೀತಿಯಾಗಿ ರಾಷ್ಟೀಯ ರೈತ ದಿನವನ್ನು ನೀವೂ ಸಹ ಸಾರ್ಥಕ ರೀತಿಯಲ್ಲಿ ಆಚರಣೆ ಮಾಡಬಹುದು. ಈ ಮೂಲಕವಾಗಿ ರೈತರಿಗೆ ಗೌರವ ಮತ್ತು ಬೆಂಬಲವನ್ನು ಸೂಚಿಸಬಹುದು. ರೈತರು ನಮ್ಮ ದೇಶದ ಬೆನ್ನೆಲುಬು ಅವರ ಹಿತ ದೇಶದ ಹಿತ. ಅನ್ನ ನೀಡುವ ರೈತನಿಗೆ ರಾಷ್ಟೀಯ ರೈತ ದಿನದ ಶುಭಾಶಯಗಳು. ಜೈ ಜವಾನ್ ಜೈ ಕಿಸಾನ್. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.